Friday, May 1, 2015

ಹೊಸ ಪಯಣ


ಬಿಸಿಲು ಧಾರಾಳವಾಗಿ ನೆಲದ ಮೇಲೆ ಹಾಸಿ ಮಲಗಿತ್ತು. ಇಂಥ ಬಿಸಿಲಿಗೇ ಪಣಕಟ್ಟಿದಂತೆ ಎದೆ ಉಬ್ಬಿಸಿ, ತಲೆ ಆಡಿಸ್ತಾ ಅಲ್ಲಲ್ಲಿ ಕೊಡೆಗಳೂ ಅರಳಿ ನಿಂತಿದ್ದವು. ಅದೇ ಹುರುಪನ್ನು ಹೊತ್ತು ಟೋಪಿಗಳೂ ಅಲ್ಲಲ್ಲಿ ಕುಣಿತ್ತಿದ್ದವು. ಬೇಕಿದ್ದ ಕೆಲವನಷ್ಟೇ ಬೆನ್ನಿಗೇರಿಸಿ, ಬೇಕಾದಬಹುದ್ದಾದ್ದನೆಲ್ಲಾ ಮ್ಯಾಜಿಕ್ಕಿನ ಬೆನ್ನಿಗೇರಿಸಿಯಾಗಿತ್ತು. ನಾವು ಹೊರಟು ನಿಂತಿರೋದು ಪಾದಯಾತ್ರೆಗೆ ಎಂದು ಅರಿವಾದಾಗಲೆಲ್ಲಾ ಏನೋ ಪುಳುಕ ಸುಳಿದು ಹೋಗುತ್ತಿತ್ತು. ಹೋಗಬೇಕಾದ ದಾರಿ ೪೦ಕಿ.ಮಿ., ಕಾಲ ನಾಲ್ಕು ದಿನ, ಗುರಿ ನರಸಾಂಬೂದಿ ಅಥವ ಬದನವಾಳು.

ಬದನವಾಳು .... ಜಾತಿಯ ಮೇಲುಕೀಳಾಟಗಳ ಹೊಲಸಾಟ-ಗುದ್ದಾಟಗಳು ಕಕ್ಕಿಸಿದ ನೆತ್ತರ ಸುಳಿಗಳ ನಡುವೆ, ಬಡತನ ಬರಗಾಲಗಳೆಬ್ಬಿಸಿಟ್ಟಿದ್ದ ಧೊಳಿನಲಿ ಮಸುಕಾಗಿ ನಿಂತಿತ್ತು. ಧೊಳೆದ್ದ ಇಂಥ ದಾರಿಗಳಲ್ಲೊಂದು ಅಲ್ಲೆ ಮೂಲೆಯಲಿ ಮರೆಯಾಗಿ ಮಾಸುತ್ತಿದ್ದ ಖಾದಿ ಕೇಂದ್ರದ ಕಡೆಗೆ ಜಾರಿತ್ತು. ಈ ಖಾದಿ ಕೇಂದ್ರವೇ ನಮ್ಮ ಈ ಪಾದನಡಿಗೆಯ ಕೇಂದ್ರಬಿಂದು. ಜಾತಿಗಳ ಅಂಧಕಾರದ ಕರಾಳ ಕತ್ತಲಲ್ಲಿ, ಮಿಂಚು ಹುಳದಂತೆ ಹಗುರ ಹಗುರಾಗಿ ಮಿನುಗುತಿದ್ದರೂ, ಆ ಕೇಂದ್ರಕ್ಕೆ ಸೊಗಸಾದ ಭವಿಷ್ಯಕ್ಕೆ ದಾರಿದೀಪವಾಗಬಲ್ಲ ತಾಕತ್ತಿತ್ತು. ಬದನವಾಳು, ಒಂದು ಕಾಲದಲ್ಲಿ ಈ ಖಾದಿ ಕೇಂದ್ರದಿಂದಾಗಿಯೆ ಪ್ರಸಿದ್ಧವಾಗಿತ್ತು. ಕುವೆಂಪು ಬದನವಾಳುವಿನ ಖಾದಿಯನ್ನೇ ಉಡುತ್ತಿದ್ದರಂತೆ. ಬಿಳಿಗಿರಿರಂಗನ ಬೆಟ್ಟದ ನಿರ್ಮಲಾನಂದರೂ ಇಲ್ಲಿಯ ಗಾಣದ ಎಣ್ಣಿಯನ್ನೇ ಬಳಸುತ್ತಿದ್ದರಂತೆ. ಈಗ ಖಾದಿ ಬಟ್ಟೆಯನ್ನು ತಯಾರಿಸುವುದರಲ್ಲಿ ಮಾತ್ರ ನಿರತವಾಗಿದ್ದರೂ ಇತ್ತೀಚಿನವರೆಗೂ ಅಂದರೆ ೧೯೯೦ರ ದಶಕದ ಅಂತ್ಯದವರೆಗೂ - ಜಾಗತೀಕರಣದ ಧಗೆ ಏರುವವರೆಗೂ, ಇಲ್ಲಿ ಸೋಪು, ಪೇಪರ್, ಬೆಂಕಿಪೊಟ್ಟಣ ತಯಾರಿಕೆ ಆಗುತ್ತಾ ಇತ್ತು. ಎಣ್ಣೆ ಗಾಣಗಳೂ ತಿರುಗುತ್ತಾ ಇದ್ದವು. ಇಂದಿಗೂ ಅಷ್ಟೂ ಗತವಲ್ಲದ ಕಾಲದ ಗಾಣ, ಪೇಪರ್ ಪ್ರೆಸ್ಸಿಂಗ್ ಮಶ್ಶೀನುಗಳು, ಇನ್ನೂ ಅನೇಕ ಯಂತ್ರಗಳು -  ತುಕ್ಕಿಡಿದು, ಹಂಚಿಲ್ಲದ, ಒಡೆದ ಗೋಡೆಗಳ, ಬೀಗ ಜಡೆದ ಬಾಗಿಲುಗಳ ಹಿಂದೆ - ಜಟೆ-ವಲ್ಮೀಕಗಳ ನಡುವೆ ಶೋಭಿಸುವ ತಪಸ್ವಿಯ ಹಾಗೆ ಗಾಡವಾಗಿ ಶಾಂತವಾಗಿ ಕಾಡುತ್ತವೆ. ಈಗ ಇಲ್ಲಿರುವುದು ಮುದಿಕೈಗಳಿಂದ ದಬ್ಬಿಸಲ್ಪಡುವ ಅಂಬರ ಚರಕಗಳು ಹಾಗು ಬೆರಳೆಣಿಕೆಯಷ್ಟು ಕೈಮಗ್ಗಗಳು. ತಗಡೋರಿನ ರಾಮಚಂದ್ರರಾಯರು ಸ್ಥಾಪಿಸಿದ್ದ ಈ ಕೇಂದ್ರವು ಅಂದು ಕರ್ನಾಟಕದ ಹಲವೆಡೆ ತನ್ನ ಶಾಖೆಗಳನ್ನೂ ಕೂಡ ಹೊಂದಿತ್ತು. ಗಾಂಧಿ ಕೂಡ ಎರಡು ಬಾರಿ ಇಲ್ಲಿಗೆ ಭೇಟಿ ಕೊಟ್ಟಿದ್ದರಂತೆ. ಅದೇ ಕೇಂದ್ರ ಇಂದು ತನ್ನ ಅಸ್ಥಿತ್ವಕ್ಕೂ ಹೆಣಗಾಡುತ್ತಿದೆ. ಜಾಗತೀಕರಣದ ಬಂಜೆ ಸುಖಗಳಿಗೆ ಮರುಳಾಗಿರುವ ನಾವು ನಮ್ಮತನದಿಂದ ಎಷ್ಟು ದೂರವಾಗುತ್ತಾ ಇದ್ದೀವಿ ಅನ್ನೋದನ್ನ ಈ ಕೇಂದ್ರದ ಸ್ಥಿತಿಯೇ ಸಾಂಕೇತಿಕವಾಗಿ ನಿರೂಪಿಸುತ್ತಾ ಇದೆ. ಇಂತಹ ಕೇಂದ್ರವನ್ನು ೧೯ನೆ ಏಪ್ರಿಲ್ ನಡೆಯಲಿದ್ದ ಸುಸ್ಥಿರ ಬದುಕಿಗೆ ರಾಷ್ಟ್ರೀಯ ಸಮಾವೇಷಕ್ಕೆ ಕೇಂದ್ರಬಿಂದುವಾಗಿ ಆಯ್ದುಕೊಂಡದ್ದು ಸೂಕ್ತವಾಗಿತ್ತು.

ಇಂದು ೧೬ನೆ ಏಪ್ರಿಲ್. ಚಾಮರಾಜನಗರದಿಂದ ಪಾದಯಾತ್ರೆಗಾಗಿ ನಾವು ಹೊರಟು ನಿಂತಿರುವ ದಿನ. ನಾವು ಭಾರತೀಯರಿಗೆ ತಲೆತಲಾಂತರಗಳಿಂದ ಈ ಪಾದಯಾತ್ರೆ ಅನ್ನೋದು ರಕ್ತಗತವಾಗಿದ್ದರೂ, ಬಾಡಿಗೆ ರಕ್ತ ತುಂಬಿಕೊಳ್ಳುತ್ತಾ ಜೀವಿಸ್ತಾ ಇರೊ ನಮಗೆ ಪಾದಯಾತ್ರೆ ಹೊಸ ಪರಿಚಯವೆ. ಮದ್ಯಾನ ೩ರ ಮಠಮಠ ಬಿಸಿಲಿನಲ್ಲಿ ತಿಂಗಳ ಬೆಳಕ ಆಸೆ ತುಂಬಿಕೊಂಡು ಹೊರಟದ್ದು, ದೀನಬಂಧು ಗಂಡು ಮಕ್ಕಳ ಮನೆಯ ಗಾಂಧಿ ವಿಗ್ರಹಕ್ಕೆ ನಮಿಸಿ. ಗಾಂಧಿಜೀ ಈ ಪಾದಯಾತ್ರೆಯನ್ನು ಆಧರಿಸಿಯೆ ಅಲ್ಲವೆ ಸ್ವಾತ್ತಂತ್ರ ಸಂಗ್ರಾಮದ ಕಾಲದಲ್ಲಿ ನಮ್ಮನ್ನು ಒಂದು ಮಾಡಿದ್ದು? ಬಹುಶಃ ಪುನಃ ಒಂದಾಗೊ ಆಸೆ ಎಲ್ಲರಲ್ಲು ಮೂಡಿದ್ದರಿಂದಲೋ ಏನೊ ನಾವು ಮತ್ತೆ ಅದೇ ಹಾದಿ ಹಿಡಿದದ್ದು.

ಹಸಿರು ಬಾವುಟಕ್ಕೆ ವಿದಾಯ ಹೇಳಿ ಹೊರಟವರು ನಾವು ನೂರು ಮಂದಿ. ಕೊನೆಯ ದಿನದವರೆಗೂ ಎಪತ್ತು ಮಂದಿಯ ಅಖಂಡ ಗುಂಪು ನಮ್ಮದು. ೧೨ರಂದ ೧೬ರ ವಯಸ್ಸಿನ ಮಕ್ಕಳು ೩೦ಕ್ಕೂ ಹೆಚ್ಚಿದ್ದರು. ಪ್ರಾಯ ೬೦ ದಾಟಿದವರು ಮುಂದಾಳುಗಳಾಗಿ ಮುನ್ನೆಡೆಸುತ್ತಿದ್ದರು. ವಯಸ್ಸು, ಸ್ಥಾನ, ಮಾನದ ವ್ಯತ್ಯಾಸದ ಅರಿವು ಲೆಕ್ಕಕ್ಕೇ ಬರಲಿಲ್ಲ. ಅದಕ್ಕೂ ಮೀರಿದ್ದೇನೊ ನಮ್ಮನ್ನು ಒಂದು ಮಾಡಿತ್ತು. ಕನಸುಗಳು ಒಂದಾಗಿತ್ತು, ಉದ್ದೇಶಗಳೂ ಒಂದಾಗಿತ್ತು. ಎಲ್ಲಕ್ಕು ಮಿಗಲಾಗಿ ಹೊಸ ಪ್ರಾರಂಭದ ಉತ್ಸಾಹದ ಹುರಿ ನಮ್ಮನೆಲ್ಲಾ ಒಂದೇ ಎಳೆಯಲ್ಲಿ ಪೋಣಿಸಿಕೊಂಡಿತ್ತು.

ಸರಿ, ನಾವು ಹೊರಟೆವು. ಎಲ್ಲಾ ದಿಕ್ಕುಗಳಿಂದಲೂ ನಮ್ಮನ್ನೆ ನೋಡುತಿದ್ದ ಕಣ್ಣುಗಳನ್ನು ಹಾದು, ಹಾಡುಗಳ ಸ್ವರಗಳ ಜೊತೆಗೆ ಸಾಗಿತ್ತು ನಮ್ಮ ನಡಿಗೆ. ಅಲ್ಲಲ್ಲಿ ಗುಂಪು ಸೇರಿ, ಬೀದಿನಾಟಕಗಳನ್ನಾಡಿ, ಧ್ಯೇಯೋದ್ದೇಶಗಳನ್ನು ಕಣ್ಣರಳಿಸಿ-ವಾರೆ ಮುಖ ಮಾಡಿ, ನಮ್ಮನ್ನೆ ನೋಡುತಿದ್ದ ಮನಸ್ಸುಗಳಿಗೆ ಸಾರಿ, ಪುನಃ ಮೆರವಣಿಗೆಯ ರೂಪದಲ್ಲಿ, ಹಾಡುಗಳ ಲಯದಲ್ಲಿ ಸಾಗಿತ್ತು ನಮ್ಮ ಸವಾರಿ.

ಅಂದು ಮೊದಲು ನಾವು ನಿಂತದ್ದು ಜೆ.ಎಸ್.ಎಸ್ ರೋಡ್-ಸೆಟ್ ಮರಿಯಾಲದಲ್ಲಿ. ಅಲ್ಲಿ ನಮಗಾಗಿ ಮಾಡಿಟ್ಟಿದ್ದ ಪಾನಿಯ ಕುಡಿದು,ವಿರಮಿಸಿ ಮುಂದೆ ನಡೆದು ಅಂದು ತಂಗಿದ್ದು ಬದನಗುಪ್ಪೆಯ ಸರಕಾರಿ ಶಾಲೆಯೊಂದರಲ್ಲಿ. ಅಹಾ, ಎಂಥ ಸ್ವಾಗತವದು ನಮಗೆ ದೊರೆತದ್ದು ಬದನಗುಪ್ಪೆ ಎಂಬ ಈ ಹಳ್ಳಿಯಲ್ಲಿ. ನಡೆದ ಆಯಾಸವನ್ನೆಲ್ಲ ಮರೆಸಿ, ಮರು ಸ್ಪೂರ್ತಿ ನೀಡಿತು ಅವರ ಆದರ ಪ್ರೀತಿ. ನಮಗಾಗಿ ಮಾಡಿಟ್ಟಿದ್ದ ಅಚ್ಚುಕಟ್ಟಾಗಿ ರುಚಿಯಾದ ಔತಣವನ್ನು ಮನೆಮಕ್ಕಳಿಗೆ ನೀಡುವಷ್ಟು ಪ್ರೀತಿಯಿಂದ ಬಡಿಸಿದರು.ಅವರಿಗೆ ನೀರಿಲ್ಲದಿದ್ದರೂ ನಮಗೆ ನೀರಿನ ಯಾವ ಕೊರತೆಯೂ ಆಗದಂತೆ ಕಾಳಜಿವಹಿಸಿದರು.

ಮಾರನೆಯದಿನ ಮುಂಜಾನೆ ಹೊರಟು, ಕೆರೆ ಗದ್ದೆಗಳನು ಹಾದು, ಬೆಂಡರವಾಡಿಯಲ್ಲಿ ಅಲೆದು ಅಲ್ಲೆ ತಿಂಡಿ ತೀರಿಸಿ, ಬೆಳಿಗ್ಗೆ ೧೦:೩೦ರ ಹೊತ್ತಿಗೆ ಹೆಗ್ವಾಡಿಯನ್ನು ತಲುಪಿದೆವು. ಆ ದಿನ ಅಲ್ಲೇ ತಂಗುವ ಏರ್ಪಾಡಾಗಿತ್ತು. ಹೆಗ್ವಾಡಿ ಬದನಗುಪ್ಪೆಗಿಂತ ಸ್ವಲ್ಪ ದೊಡ್ಡ ಹಳ್ಳಿ. ಪ್ರಯಾಣದ ಉದ್ದಕ್ಕೂ ವಿಚಿತ್ರ ಬಗೆಯ ಲಯ ಎಲ್ಲಾ ಹಳ್ಳಿಗಳಲ್ಲೂ ಗುನುಗುತಿತ್ತು. ಹಳ್ಳಿ ದೊಡ್ಡದಾದಂತೆಲ್ಲ ನಾವು ಹೆಚ್ಚು ಅಪರಿಚಿತರಾಗಿ ಉಳಿಯುತಿದ್ದೆವು. ಅವರ ಮನ ಮುಟ್ಟವ ನಮ್ಮ ತಾಕತ್ತು ಅಷ್ಟೇ ಕ್ಷೀಣಿಸುತಿತ್ತು.

ಮಾರನೆಯ ದಿನ ಇನ್ನೂ ದೊಡ್ಡ ಹಳ್ಳಿ ಕವಲಂದೆಯ ಮೂಲಕ ಹಾದು ಹೋಗುವಾಗ ಈ ಅಂತರ ಇನ್ನೂ ಗಾಡವಾಗಿತ್ತು. ನಾವು ಅವರ ಮನಸ್ಸನ್ನು ಮುಟ್ಟಲೇ ಇಲ್ಲ. ಅವರಿಗೂ ನಮ್ಮ ಮೇಲೆ ಆದರ ಗೌರವಗಳಿದ್ದರೂ ಯಾಕೊ ನಾವು ಸ್ವೀಕೃತರಾದಂತೆ ಅನಿಸಲಿಲ್ಲ. ಮೂರನೆಯ ದಿನವಾದ ಇಂದಿನ ಮದ್ಯಾನ ನಾವು ದೇವನೂರಿನ ಮಠದಲ್ಲಿದ್ದೆವು. ಅಲ್ಲೊ ಸ್ವಚ್ಛ ಶೌಚಾಲಯ ಇಡೀ ಮಠದಲ್ಲಿರಲಿಲ್ಲ.ಎಂಥ ಪುಟ್ಟ ಹಳ್ಳಿಯಲೂ ಇಂಥಹ ಸಮಸ್ಸೆ ಬಂದಿರಲಿಲ್ಲ. ಇಂಥ ದೊಡ್ಡ ಆಧ್ಯಾತ್ಮಕ ಕೇಂದ್ರದಲ್ಲಿ, ಬಹಳ ಒಳ್ಳೆ ಕೆಲಸಗಳಲ್ಲಿ ನಿರತವಾಗಿದ್ದ ಇಂಥ ಧರ್ಮಕ್ಷೇತ್ರದಲ್ಲಿ, ಶೌಚಾಲಯದ ಬಗ್ಗೆ ಯಾಕಿಷ್ಟು ನಿರ್ಲಕ್ಷೆ? ಹೇಗೂ ನಿಭಾಯಿಸಿ ಮಧ್ಯಾನದ ಪ್ರಸಾದ ಸ್ವೀಕರಿಸಿ, ಸಂಜೆ ೬ರ ಹೊತ್ತಿಗೆ ತಗಡೂರಿನಲ್ಲಿದ್ದೆವು. ಅಲ್ಲಿ ಎಲ್ಲಾ ಪಾದಯಾತ್ರಿಕರಿಗೂ ಪಾರ್ಥನಾ ಸಭೆ ಏರ್ಪಡಿಸಲಾಗಿತ್ತು. ನಮ್ಮ ಮಕ್ಕಳ ಬೀದಿ ನಾಟಕ ಎಲ್ಲರ ಗಮನ ಸೆಳೆಯಿತು. ಅಂದು ಜನತಾ ಶಾಲೆಯಲ್ಲಿ ನಾವೆಲ್ಲ ತಂಗಿದೆವು. ಅಲ್ಲಿದ್ದ ಶೌಚಾಲಯಗಳನ್ನು ನಾವೆ ಶುಚಿಗೊಳಿಸಿ, ಬೆಳಕಿಲ್ಲದ ಕಡೆ ಮೋಂಬತ್ತಿಗಳನು ಹಚ್ಚಿ, ಶೌಚಕ್ಕಾಗಿ ನೀರನ್ನು ಬಕೆಟ್ಟುಗಳಲ್ಲಿ ತುಂಬಿ, ರೂಮ್ಮನು ಕ್ಲೀನ್ ಮಾಡಿಕೊಂಡು, ಸಂಸಾರ ಹೂಡಿದೆವು. ಆ ರಾತ್ರಿ ನೂರಕ್ಕು ಹೆಚ್ಚು ಮಂದಿ ನಮ್ಮೊಂದಿಗೆ ತಂಗಿದ್ದರು. ನಮ್ಮ ಸಂಸಾರ ನಿಜವಾಗಿಯು ಬೆಳೆದಿತ್ತು.

ಕೊನೆಯ ದಿನ ಬೆಳ್ಳಿಗ್ಗೆ ೫:೩೦ರ ಹೊತ್ತಿಗೆ ಹೊರಟ ನಾವು ದೇವನೂರು ಮಠಕ್ಕೆ ಮರಳಿ ಬಂದು ತಿಂಡಿ ಮುಗಿಸಿದೆವು. ಮೈಸೂರುನಿಂದ ಬಂದಿದ್ದ ಪಾದಯಾತ್ರಿಗಳ ಜೊತೆ ಅಂತಿಮ ಗುರಿ ಬದನವಾಳುವಿನ ಕಡೆಗೆ ಹೊರಟೆವು. ಇಷ್ಟು ದಿನ ಒಂದೇ ಎನಿಸಿದ್ದ ಗುಂಪು ಇಂದು ಒಡೆದಂತಿತ್ತು. ವಿಚಿತ್ರ ಭಾವವೊಂದು ಗುಂಪನ್ನು ಚದುರಿಸಿ ಮೈಸೂರು ಚಾಮರಾಜನಗರಕ್ಕಿಂತ ಬೇರೆ, ಅದು ಇನ್ಯಾವುದರಿಂದಲೂ ಬೇರೆಯಾಗಿ, ಜೊತೆಗಿದ್ದರೂ ಜೊತೆ ಇರಲ್ಲಿಲ್ಲ ನಾವು, ಗುರಿ ಕೂಡಿದ್ದರೂ ಬೆಸುಗೆ ಸವೆದಿತ್ತು. ಯಾವುದಾ ಭಾವ? ನಮ್ಮನ್ನು ಒಂದು ಮಾಡಕೊಡದ ಆ ಕಿಡಿಯಾದರು ಯಾವುದು? ಬೇರೆಯಾಗುವುದು ಇಷ್ಡು ಅನಿವಾರ್ಯವಾಗಿ ಹೋಗಿತ್ತೆ? ಹಾಗಿದ್ದು ನಮ್ಮನ್ನು ಒಂದು ಆಯಾಮದಲ್ಲಿ ಒಂದು ಮಾಡಿತ್ತು ಪಾದನಡಿಗೆ.

ಬೆಳ್ಳಿಗ್ಗೆ ೮:೩೦ರ ಹೊತ್ತಿಗೆ ನಮ್ಮ ನಾಲ್ಕು ದಿನಗಳ ಅಂತಿಮ ಗುರಿ ಬದನವಾಳುವನ್ನು ತಲುಪಿದೆವು. ಹೊಸ ಆರಂಭದ ಪೀಠಿಕೆಗೆ ಮೊದಲಕ್ಷರ ಮುದ್ರಿತವಾಯಿತು. ದೂರದೂರುಗಳಿಂದ ಬಂದ ೫೦೦೦ ಜನರಲ್ಲಿ ಒಂದಾದೆವು. ಹಲವಾರು ಚರ್ಚೆಗಳು, ಸಾವಿರಾರು ಸಮಾನಮನಸ್ಕರು! ನಾಡ ಜಾತ್ರೆಯ ಕಂಪು ಅಲೆಲ್ಲಾ ಹರಡುತಿತ್ತು. ಸಮಾವೇಶದ ಮುಂದಿನ ಹೆಜ್ಜೆಗಳ ಅರಿವು ಅಲ್ಲಿ ಹಲವರಲ್ಲಿರಲಿಲ್ಲ. ಆ ಅರಿವು ನನಗೂ ಇರಲಿಲ್ಲ. ಆದರೂ ಇಷ್ಟು ಜನ ಸಹಬಾಳ್ವೆಗಾಗಿ ಆಶಿಸಿ ಸೇರಿದ್ದು ಮಹತ್ತಾದ ಸೂಚನೆ. ಸಮಾವೇಶ ಸಾರ್ಥಕ.

ಮುಂದೆ ಗುರಿ ಇದ್ದರೂ ಗುರಿಗಿಂತ ನಡಿಗೆ ಹಿತವಾಗಿತ್ತು. ಧ್ಯೇಯೆಗಳಿದ್ದವು ನಿಜ ಆದರೆ ಸಾಂಗತ್ಯ ಅದಕ್ಕಿಂತ ಹೆಚ್ಚು ಪ್ರಿಯವಾಗಿತ್ತು. ಮೆರೆವಣಿಗೆ ಹೌದಾದರು ತೋರಿಕೆಯ ನೆಲೆಯ ಮೀರಿತ್ತು. ಹೌದು, ಪಾದಯಾತ್ರೆ ಆಧ್ಯಾತ್ಮದ ಹಾದಿಯನ್ನೇ ನಕಲು ಮಾಡಿತ್ತು. ಈ ಪಾದಯಾತ್ರೆ ಮುಗಿದಿದ್ದರೂ ಅದು ಆರಂಭವಷ್ಟೆ. ಹಳತರಲಿ ಹುದುಗಿರುವ ಬಣ್ಣಗಳನ್ನು ಹೆಕ್ಕಿ, ಇಂದಿನ ಕನಸುಗಳ ಚಿತ್ತಾರ ಹೊಸತಾದ ತೆರೆಯ ಮೇಲೆ ಮೂಡಿಸುವ. ಹಳತರಲಿ ಹುದುಗಿರುವ ಅಕ್ಷರಗಳನು ಆಯ್ದು ಇಂದಿನ ಭಾವಗಳಿಗೆ ಹೊಸ ಪದವ ಕಟ್ಟುವ. ಬನ್ನಿ, ಒಟ್ಟಾಗಿ ಹೊಸ ಯಾತ್ರೆಗೆ ಸಜ್ಜಾಗಿ ನಿಲ್ಲುವ.